Friday, September 21, 2007

ಚಿಕ್ಕ ಆಸೆ....

ಆಸೆ ನನಗೆ ನಾಲ್ಕು ಚಿಕ್ಕ ಆಸೆ
ಮಳೆಗಾಲಕ್ಕೆ ಮುಂಚೆ ಮಳೆಯಂತೆ
ಕೇವಲ ನಾಲ್ಕೇ ನಾಲ್ಕು ಹನಿಗಳ ಆಸೆ

ಅವಳ ಕೆನ್ನೆಯ ಮೇಲೆ
ಮುತ್ತಾಗಿ ಹರಿಯುವ ಆಸೆ
ಅವಳನೊಮ್ಮೆ ಬಿಗಿದಪ್ಪುವ ಆಸೆ
ನನ್ನ ಆಸೆಗಳೆಲ್ಲ ಕೈಗೂಡುವ ಮುನ್ನ
ಅವಳ ಕಣ್ಣ ಕಾರ್ಮೋಡ ಅಳಿಸಿ
ಮತ್ತದೇ ಹೊಳಪು ಕಾಣುವ ಆಸೆ

ಅವಳ ಮಡಿಲೊಳಗೊಮ್ಮೆ ತಲೆಯನಿಕ್ಕಿ
ನನ್ನೆಲ್ಲ ದುಃಖಗಳ ಮರೆಯುವಾಸೆ
ಅವಳ ಬೆರಳೊಳಗೆ ಬೆರಳ ಬೆರೆಸಿ
ಹಾಗೆಯೇ ಏಕಾಂತದಲಿ ನಡೆವ ಆಸೆ
ಅವಳು ನೋಡುವ ಹಾಗೆ ಮರಳ ಮೇಲೆ
ಬೆರಳಿಂದ ಅವಳ ಹೆಸರ ಬರೆಯುವ ಆಸೆ

ಅವಳ ನೆನಪಿನಲಿ ರಾತ್ರಿ
ಹಾಗೊಮ್ಮೆ ಕಣ್ಮುಚ್ಚಿ
ಅವಳ ನಗುಮೊಗವೊಮ್ಮೆ ಹಾಣುವಾಸೆ
ಜೀವ ಹೋಗುವ ಮುನ್ನ ಅವಳ
ತುಂಬುಗೆನ್ನೆಯನೊಮ್ಮೆ
ಕೈಯಲ್ಲಿ ತುಂಬಿಸಿಕೊಂಡು
ಹಣೆಯ ಮೇಲೊಂದು ಮುತ್ತನಿಕ್ಕುವ ಆಸೆ.....
ಅವಳೇನು?

ಕದ್ದು ಕದ್ದು
ಅಂದ ಹೀರುತ್ತಿದ್ದ
ಆ ಹುಡುಗ,
ಅವಳು
ಅಂದದ ರೂಪಾ..
ನಾನು ಕೂಡಲೇ ಎಚ್ಚರಿಸಿದೆ,
ಅವಳೇನು
ಅಡಿಗಾ’ಸ್ ಸೂಪಾ?
ವ್ಯತ್ಯಾಸ...

ಕನಸ ಮಣ್ಣ ಮನೆಯವನು ನಾನು |
ಅವಳು ಎತ್ತರದ ಮಹಲಿನವಳು ||

ಚಂದ್ರನಂತಿರಬಹುದು ನನ್ನ ಮುಖ |
ಆದರೆ ಅವಳು ಸೂರ್ಯನ ಅಮಲಿನವಳು ||

ಮಿರಿ-ಮಿರಿ ಮಿಂಚುವ ತಂಬಿಗೆ ನನ್ನ ತಲೆ |
ಆದೀತೆ ಹೊಂದಿಕೆ ಅವಳ ಕರಿಯ ಕುರುಳು ||

ನೀ ವಸಂತವೆಂದೆ ಅವಳ ವರ್ಣಿಸುವಾಗ |
ಹೇಗೆ ನಕ್ಕಾಳು ಕಾವ್ಯ ಬಯಸುವವಳು |

ಎಷ್ಟು ಅಂತರ ನಮ್ಮ ಆಸೆ ಆಕಾಂಕ್ಷೆಗಳಲಿ |
ನಾನು ಕವಿ ಬಡವ, ಅವಳು ಹಗಲುಗನಸಿನವಳು ||

ಬಂದುಬಿಡು ನೀನೆನ್ನ ಮಣ್ಣ ಮನೆಗೊಮ್ಮೆ |
ಇಲ್ಲಿ ನೂರು ದಿನಗಳು ಅಲ್ಲಿ ಒಂದು ಇರುಳು ||
ಆಸೆ...

ನಿನ್ನ ಕಣ್ಣ
ಹನಿಗಳಿಗೂ
ನಿನ್ನ
ಕೆನ್ನೆ
ಚುಂಬಿಸುವ ಕಾತರ...
ನೋವು
ನಲಿವಿನ
ನೆಪಮಾಡಿ
ಹರಿದುಬಿಡುವ
ಆತುರ...

ಕಾಣಿಕೆ

ಹಾಗೆ ಇರಲಿ ಬೇಡ ನಿನಗೆ
ಅದರ ಗೊಡವೆಯು
ನಿನ್ನ ಕೆನ್ನೆ ಮೇಲೆ ಮೂಡಿದ
ಹೊಸತು ಮೊಡವೆಯು....
ಅಲಂಕಾರದಲ್ಲಿ ಅದಕೆ
ಸಾಟಿ ಎಲ್ಲಿದೆ?
ನಿನ್ನ ಇನಿಯ ನಿನಗೆ ಕೊಟ್ಟ
ಮೊದಲ ಒಡವೆಯು...
ತಹ..

ದೇಶದ
ಉನ್ನತಿಗಾಗಿ
ಅವಸರದಿಂದ
ಮಾಡಿಕೊಂಡೆವು
ಗ್ಯಾಟ್ ಎಂಬ
ತಹ.
ನಂತರ
ಎಲ್ಲರಿಗೂ
ತಹ-ತಹ!!
ಬಾಳು...

ಕೂಡಲೇ
ಸೇರಿಕೋ
ತರಳಬಾಳು.
ನಿನ್ನದು
ಬಹಳ
ತರಳ-ಬಾಳು..!
ಬಂಧನ..

ದೂರವಿರಲಿಲ್ಲ
ಎಂದಿಗೂ ನಿನ್ನಿಂದ
ಏಕೆ ನನ್ನಲ್ಲಿ ಇಂಥ ವಿರಸ ?
ಒಪ್ಪಿದ್ದೆ ನಾನೇ ಈ
ಸಂಕೋಲೆಗಳನೆಲ್ಲ
ಆಗಸದ ಎತ್ತರ ಅಳೆದು ಬಂದೆ
ಈ ನಾಲ್ಕು ದಿವಸ...
ಬಲಿ..

ನನ್ನ ಪತ್ರದಲಿ
ದನಿಯ
ಹೇಗೆ ತುಂಬಲಿ ?
ಅಲ್ಲಿ
ಬರೀ ಅಕ್ಷರಗಳು,
ಅರ್ಥದ
ಬಲಿ...
__ಣಿ...

ಮದುವೆಗೆ
ಮುಂಚೆ
ಅವಳು
ರೂಪಿಣಿ
ರೋಹಿಣಿ...
ನಂತರ
ಸ್ವಲ್ಪ
ರೂಪಾಂತರ
ಲಂಕಿಣಿ...
ಡಾಕಿಣಿ...!
ಅಂತರ...

ಕೆಲವು
ದಿನಗಳಿಂದ
ನನಗೂ ಅವಳಿಗೂ
ಅಂತರ..
ಕಾರಣ ?
ಅವಳ
ಮನೆಯಲ್ಲಿರುವ
"ಅಪ್ಪ" ಎನ್ನುವ
ಕರಿ-ಬೆಂತರ !!
ಆಮದು..

ಕಣ್ಣು-ಕಣ್ಣು
ಮಾತನಾಡಲು
ಕೂಡಲೆ
ಮಾಡಿಕೊಂಡೆ
ಆಮದು.
ಅತ್ತೆಯ ಮಗಳೆಂಬ
ಆ-ಮಧು॥
ಅಧ್ಯಯನ..

ಹುಡುಗ
ತುಂಬಾ ಅಧ್ಯಯನಶೀಲ...

ಅವನ
ಅಧ್ಯಯನ ?
ಶೀಲಾ !!
ಭಾವನೆ!

ಸಾಹಿತಿಗಳಿಗೆ
ಏಕೆ ಬೇಕು
ಸಂಭಾವನೆ ?
ಇಲ್ಲದಿದ್ದರೆ
ಅವರು
ಖ್ಯಾತರಲ್ಲ ಎನ್ನುವ
SOME-ಭಾವನೆ !!
___ ?

ಪಕ್ಕದ ಮನೆಯ
ಪದ್ಮಾ
ಮೂರು
ಎಂದಾಗ
ಎದುರು ಮನೆಯ
ಮುರಾರಿ
ಯಾವ ಮುನ್ಸೂಚನೆಯೂ ಇಲ್ಲದೆ
ಅಲ್ಲಿಂದ
ಪರಾರಿ...!
____ಕಾರ !

ಲಾಡಿ
ಮತ್ತು
ಲಂಗ
ಇರುವುದು
ಪರಕಾರ.
ಕಿಲಾಡಿ
ಮತ್ತು
ಲಫಂಗ
ಇರುವುದು?
ಸರಕಾರ..!!!!
ಅನುಭವ...

ಪ್ರೀತಿಯ ವಿಷಯ
ಬರೆಯಲು
ಬೇಕಿಲ್ಲ
ಅನುಭವ..
ದಿನವೂ ನೋಡುವೆ
ಪಕ್ಕದ ಮನೆಯ
ಅನು
ಮತ್ತು
ಅವಳ
ಭಾವ... !!
ಸೋಲು....

ಪ್ರತೀ
ಜಗಳದಲ್ಲೂ ನನಗೆ
ಸೋಲು
ಕಟ್ಟಿಟ್ಟ ಬುತ್ತಿ.
ಅವಳ ಯುದ್ಧತಂತ್ರ ?
ಕೇವಲ
ಒಂದು ಮುತ್ತು
ಕೊರಳಿಗೆ
ತೋಳು ಸುತ್ತಿ...!!
ಭವಿಷ್ಯ...

ಪ್ರತೀ ತಿಂಗಳ
ಭವಿಷ್ಯ
" ಗಂಡಾಂತರ "..
ಹೌದು,
ಮನೆಯಲ್ಲಿ
ಗಂಡ + ಅಂತರ...
____ಲೇ ?

ಹುಡುಗ ಹೇಳಿದ
ನೀನೇ ನನ್ನ
ಶಾಂತಲೆ, ಬಿಜ್ಜಲೆ....
ಹುಡುಗಿ
ಕೂಡಲೇ ಕೇಳಿದಳು
ಚಪ್ಪಲೆ ಬಿಚ್ಚಲೆ?
ಗಾಂಧಾರಿ....

ನನ್ನ SIM-ನಲ್ಲಿ
ನೂರು SMS
free...

ಅದಕ್ಕೇ
ನನ್ನ ಮೊಬೈಲ್
ಪ್ರತೀರಾತ್ರಿ
ಗಾಂಧಾರಿ....
ನಡುವೆ...

ಜೀವನ ಯಾವಾಗ
ಕೈ
ಕೊಡುವುದೋ!
ಕಾಲವೇ ಬಲ್ಲುದು...
ಜೀವನಿಗೂ ಕಾಲನಿಗೂ
ನಡುವೆ ಯಾವ
’ಮಂತ್ರ’
ನಿಲ್ಲಬಲ್ಲುದು?
ಖಾರ-ನೀರು...

ಹಸಿಮೆಣಸಿನಕಾಯಿಯಂತೆ
ಅವಳ
ನಾಸಿಕ.

ನಾನು ರಾಯಚೂರಿನವ
ಖಾರವಿದ್ದಷ್ಟೂ
ಜಾಸ್ತಿ ರಸಿಕ...!
ಸಾಹಿತ್ಯ-ಅಮೃತ..

ಇಲ್ಲಿಹವು
ಜೀವ ನದಿಗಳ ಸೆಲೆ
ಇಲ್ಲಿಯೇ ಸಾಹಿತ್ಯದ
ಉದಕ.

ಅದಕ್ಕೇ ಈ
ಹೆಸರು...
ಉ./ದ.ಕ.
ನೀರವತೆ..

ಕೇಳಿದೆ ನನ್ನ
ಪ್ರೀತಿಯ ಮಡದಿಗೆ
’ಏನಿದು ನೀರವತೆ?’
ಮುನಿದ ಮಡದಿ
ನುಡಿದಳು
’ ಇದುವರೆಗೆ
ನೀರು ಹೊತ್ತೆ!!"
__ನಲ್ಲ..

ಮಾತುಮಾತಿಗೂ ನಿನ್ನ
ಹೊಗಳಲು
ನಾನೇನೂ
ಕಾಳಿದಾಸನಲ್ಲ !!
ಗಂಡ ಗುಡುಗಿದ.
ಹೆಂಡತಿ
ಕಾಳಿಯಾದಳು,
’ದಾಸ’ನಾದ ಈ
ನಲ್ಲ.... !!

ಯಾಕೆ ?

ಊರಿನಲ್ಲೇ ಸುಂದರಿ
ನನ್ನ
ಮನೆಯಾಕೆ.

ಅವಳ
ಹೃದಯದಲ್ಲೇ
ಇದ್ದುಬಿಡುವೆ,
ನನಗೆ
ಮನೆ-ಯಾಕೆ ?

ದಾನ


ಇದು ಇರುವುದೇ
ಹೀಗೆ
ಇಂಟೆನ್ಸಿವ್ ಕೇರ್ ಯುನಿಟ್.

ಇಲ್ಲಿ ನಮಗೆ
ಸಿಗುವುದು
ಜೀವನ
ಇಡಿಯಾಗಿ
ಒಂದೊಂದೇ ಮಿನಿಟ್..

ಹೆಚ್ಚು-ಕಮ್ಮಿ


ಬದುಕಲು ಜೀವಿಗೆ
ಬೇಕೇ ಬೇಕು
ಬಿ. ಪಿ.
ಹೆಚ್ಚಾದರೂ
ಕಮ್ಮಿಯಾದರೂ
ಕಾಲನ ಕಹಳೆ
ಯಮನ ಪೀಪಿ...

ಪ್ರಾಸ


ಕ್ರೆಡಿಟ್ ಕಾರ್ಡಿನ
ಹುಡುಗಿ
ತುಂಬಾ ಹರಿತ.

ಅದಕ್ಕೂ ಪ್ರಾಸ
ಅವಳ ಹೆಸರು,
’ ಸರಿ-ತಾ’ !!

ಮದುವೆ


ಮುಂಚೆ
ಅವ
ಪುಂಗವ.

ನಂತರ
ಅವಳು ಪುಂಗಿ,
ಅವ
ಹಲ್ಲು ಕಿತ್ತಿದ ಹಾವ ?

Saturday, September 15, 2007

ಊರು


ಆ ಮರಾಠಿ
ಹುಡುಗಿಯ ಊರು
ಪೂನಾ.
ಕನ್ನಡ ಕಲಿತು
ಈಗ ಹೇಳುವಳು
ಕರ್ನಾಟಕದ
ಪೂ-ನಾ !!