Friday, June 13, 2008

ಆಷಾಢ...

ನೀಲಿ ಒಂಟಿ ಆಕಾಶ
ಬಹುಶಃ ಆಗಸಕ್ಕದು ಆಷಾಢ..
ದೂರದೂರಿನ ನಲ್ಲೆ
ಪತ್ರದಲಿ ಕಳುಹಿದ
ಶುಭ್ರ ಮುತ್ತುಗಳು...
ಅಲ್ಲಿ ಬರಿ ನಿಟ್ಟುಸಿರು..
ವಿರಹದ ತಾಪ..

Saturday, March 8, 2008

ನೀನಿಲ್ಲ:

ಮರಳಿ ಬಂದಾಗ ಮನೆಗೆ
ಬಾಗಿಲೊಳು ನೀನಿಲ್ಲ.

ಹುಡುಕುತಿರೆ ಕಣ್ಣು
ಮನೆಯೊಳಗೆ ನೀನಿಲ್ಲ.

ಕಣ್ಣ ಮುಚ್ಚಿ
ತೋಳ ಚಾಚಿದರೆ
ಬರಿಯ ಬಿಸಿ ಉಸಿರು,

ತೋಳಿನೊಳು

ನೀನಿಲ್ಲ.

ನೀನಿಲ್ಲ....
ಅಲೆ..

ಮೊದಲು
ದೂರದ ಊರಿನ
ನನ್ನ ಹುಡುಗಿ
ಆಗೊಮ್ಮೆ ಈಗೊಮ್ಮೆಯ ಸುನಾಮಿ ಅಲೆ.

ಮದುವೆಯ ನಂತರ
ದಂಡೆಯ ತನ್ನೊಳಗೆ
ಸೆಳೆದುಕೊಳ್ಳುವ ಸಣ್ಣ ಅಲೆ...

Friday, September 21, 2007

ಚಿಕ್ಕ ಆಸೆ....

ಆಸೆ ನನಗೆ ನಾಲ್ಕು ಚಿಕ್ಕ ಆಸೆ
ಮಳೆಗಾಲಕ್ಕೆ ಮುಂಚೆ ಮಳೆಯಂತೆ
ಕೇವಲ ನಾಲ್ಕೇ ನಾಲ್ಕು ಹನಿಗಳ ಆಸೆ

ಅವಳ ಕೆನ್ನೆಯ ಮೇಲೆ
ಮುತ್ತಾಗಿ ಹರಿಯುವ ಆಸೆ
ಅವಳನೊಮ್ಮೆ ಬಿಗಿದಪ್ಪುವ ಆಸೆ
ನನ್ನ ಆಸೆಗಳೆಲ್ಲ ಕೈಗೂಡುವ ಮುನ್ನ
ಅವಳ ಕಣ್ಣ ಕಾರ್ಮೋಡ ಅಳಿಸಿ
ಮತ್ತದೇ ಹೊಳಪು ಕಾಣುವ ಆಸೆ

ಅವಳ ಮಡಿಲೊಳಗೊಮ್ಮೆ ತಲೆಯನಿಕ್ಕಿ
ನನ್ನೆಲ್ಲ ದುಃಖಗಳ ಮರೆಯುವಾಸೆ
ಅವಳ ಬೆರಳೊಳಗೆ ಬೆರಳ ಬೆರೆಸಿ
ಹಾಗೆಯೇ ಏಕಾಂತದಲಿ ನಡೆವ ಆಸೆ
ಅವಳು ನೋಡುವ ಹಾಗೆ ಮರಳ ಮೇಲೆ
ಬೆರಳಿಂದ ಅವಳ ಹೆಸರ ಬರೆಯುವ ಆಸೆ

ಅವಳ ನೆನಪಿನಲಿ ರಾತ್ರಿ
ಹಾಗೊಮ್ಮೆ ಕಣ್ಮುಚ್ಚಿ
ಅವಳ ನಗುಮೊಗವೊಮ್ಮೆ ಹಾಣುವಾಸೆ
ಜೀವ ಹೋಗುವ ಮುನ್ನ ಅವಳ
ತುಂಬುಗೆನ್ನೆಯನೊಮ್ಮೆ
ಕೈಯಲ್ಲಿ ತುಂಬಿಸಿಕೊಂಡು
ಹಣೆಯ ಮೇಲೊಂದು ಮುತ್ತನಿಕ್ಕುವ ಆಸೆ.....
ಅವಳೇನು?

ಕದ್ದು ಕದ್ದು
ಅಂದ ಹೀರುತ್ತಿದ್ದ
ಆ ಹುಡುಗ,
ಅವಳು
ಅಂದದ ರೂಪಾ..
ನಾನು ಕೂಡಲೇ ಎಚ್ಚರಿಸಿದೆ,
ಅವಳೇನು
ಅಡಿಗಾ’ಸ್ ಸೂಪಾ?
ವ್ಯತ್ಯಾಸ...

ಕನಸ ಮಣ್ಣ ಮನೆಯವನು ನಾನು |
ಅವಳು ಎತ್ತರದ ಮಹಲಿನವಳು ||

ಚಂದ್ರನಂತಿರಬಹುದು ನನ್ನ ಮುಖ |
ಆದರೆ ಅವಳು ಸೂರ್ಯನ ಅಮಲಿನವಳು ||

ಮಿರಿ-ಮಿರಿ ಮಿಂಚುವ ತಂಬಿಗೆ ನನ್ನ ತಲೆ |
ಆದೀತೆ ಹೊಂದಿಕೆ ಅವಳ ಕರಿಯ ಕುರುಳು ||

ನೀ ವಸಂತವೆಂದೆ ಅವಳ ವರ್ಣಿಸುವಾಗ |
ಹೇಗೆ ನಕ್ಕಾಳು ಕಾವ್ಯ ಬಯಸುವವಳು |

ಎಷ್ಟು ಅಂತರ ನಮ್ಮ ಆಸೆ ಆಕಾಂಕ್ಷೆಗಳಲಿ |
ನಾನು ಕವಿ ಬಡವ, ಅವಳು ಹಗಲುಗನಸಿನವಳು ||

ಬಂದುಬಿಡು ನೀನೆನ್ನ ಮಣ್ಣ ಮನೆಗೊಮ್ಮೆ |
ಇಲ್ಲಿ ನೂರು ದಿನಗಳು ಅಲ್ಲಿ ಒಂದು ಇರುಳು ||
ಆಸೆ...

ನಿನ್ನ ಕಣ್ಣ
ಹನಿಗಳಿಗೂ
ನಿನ್ನ
ಕೆನ್ನೆ
ಚುಂಬಿಸುವ ಕಾತರ...
ನೋವು
ನಲಿವಿನ
ನೆಪಮಾಡಿ
ಹರಿದುಬಿಡುವ
ಆತುರ...