Friday, November 30, 2012

ಎಷ್ಟು ಎತ್ತರ ಈ ಪ್ರೇಮ ?


ಅದ್ಯಾಕೊ ಗೊತ್ತಿಲ್ಲ... ಭಾಳ ದಿನದಿಂದ ಒಂದು ಹಳೇ ಬ್ಲಾಗ್ ಆರ್ಟಿಕಲ್ ನೆನಪಾಗ್ಲಿಕ್ಕತ್ತದ.. ಅದರ ಬಗ್ಗೆ ನಾನು ನಿಮಗ ಹೇಳ್ಲೇಬೇಕು ಅನ್ನಷ್ಟು ಮನಸ್ಸಿನ್ಯಾಗ ಕುದೀಲಿಕ್ಕ ಹತ್ತ್ಯಾದ.. ಹೇಳಿ ಬಿಟ್ರ ಮನಸು ನಿರಾಳವಾಗಿ ಉಸರಾಡ್ತದ ಅನಸ್ತದ.. ಹೇಳ್ಲ್ಯಾ?

ನಾನು ಹೈದರಾಬಾದನ್ಯಾಗ ಇದ್ದೆ ಒಂದು ವರ್ಷ.. ಅವಾಗ ಬ್ಲಾಗ್ ಬಗ್ಗೆ ಇನ್ನೂ ಅಷ್ಟೊಂದು ಹುಚ್ಚು ಎಲ್ಲಾರಿಗೂ ಹತ್ತಿರಲಿಲ್ಲ.. ಅವಾಗ ನನ್ನ ಗೆಳ್ಯಾ ಒಬ್ಬಾಂವ ಬ್ಲಾಗ್ ಬರೀತಿದ್ದ.. ಅದು ಅವನ ಪರ್ಸನಲ್ ಬ್ಲಾಗ್ ಇದ್ಧಂಗ ಇತ್ತು.. ಅದರಾಗ ಒಂದು ಘಟನೆ ಬಗ್ಗೆ ಹೇಳಿದ್ದು ಇನ್ನೂ ನನ್ನ ತಲ್ಯಾಗ ಅದ.. ಅದನ್ನ ಮತ್ತ ನಾನೂ ಹೇಳತೀನಿ ನಿಮಗ..

ಒಂದು ಊರಿನ್ಯಾಗ ಒಂದೇ ಕಾಲೇಜಿನ್ಯಾಗ ಓದೋ ಹುಡುಗ (ಶಂಕರ) ಹುಡುಗಿ (ರತ್ನಾ) ಇದ್ರು.. ಶಂಕರ ರತ್ನಾನ್ನ ಭಾಳ ಪ್ರೀತಿ ಮಾಡ್ತಿದ್ದ.. ಆದ್ರ ಆಕಿಗೆ ಹೇಳಲಿಲ್ಲ.. ಆಕಿಗೆ ಲಗ್ನ ಗೊತ್ತಾಯ್ತು. ಆಕಿ ಅವನನ್ನ ಬಿಟ್ಟು ಹೋದ್ಲು.. ಅವ ಒಬ್ಬಾವ್ನೇ ಇದ್ದ.. ಏನೇನೋ ಮಾಡಿದ.. ಎಲ್ಲೆಲ್ಲೋ ಹೋದ.. ಮನಸ್ಸು ಈ ಜಗತ್ತಿನ್ಯಾಗ ಇರಲಿಲ್ಲ.. ಪುಸ್ತಕಕ್ಕ ಗಂಟುಬಿದ್ದ, ಜ್ಞಾನ ಮನಸ್ಸು ಎರಡೂ ಬೆಳೀತು..

ಕಾಲ ಮುಂದಕ್ಕ ಹೋಗ್ತದಲ್ಲ? ಹೋಯ್ತು.. ೩-೪ ವರ್ಷ ಕಳದ ಮ್ಯಾಲೆ ಮತ್ತ ಅಕಿ ಸಿಕ್ಲು.. ಆದ್ರ ಶಂಕರ ಅಂದುಕೊಂಡಂಗ ರತ್ನಾ ಅರಾಮಾಗಿ ಇರಲಿಲ್ಲ.. ಲಗ್ನ ಆದ ಎರಡು ತಿಂಗಳಿನ್ಯಾಗೆ ಅಕಿದು ಡೈವೋರ್ಸ್ ಆಗಿತ್ತು. ಯಾಕಂದ್ರ ಆಕಿ ಗಂಡ ಆಕಿಗೆ ಭಾಳ ಕಾಟ ಕೊಡ್ತಿದ್ದ. ಜೀವ ಹಿಂಡಿಬಿಟ್ಟಿದ್ದ.. ಮತ್ತ ಅಪ್ಪನ ಮನಿಗೆ ಬಂದಮ್ಯಾಲೆ ಆಕಿಗೆ ತನ್ನ ಇನ್ನೊಬ್ಬ ಗೆಳತಿಯಿಂದ ಗೊತ್ತಾಗಿತ್ತು ಶಂಕರ ತನ್ನ ಎಷ್ಟು ಪ್ರೀತಿ ಮಾಡ್ತಾನ ಅಂತ.. ಆಕಿ ನೆನಪಿನ್ಯಾಗ ಅವ ಅಷ್ಟು ವರ್ಷ ಹೆಂಗ ಹುಚ್ಚ ಆಗಿ ತಿರಿಗ್ಯಾನ ಅಂತ.. ಆಕಿ ಅವನ ಹೆಗಲ ಮ್ಯಾಲೆ ತಲಿ ಇಟ್ಟು ಮನಸು ಬಿಚ್ಚಿ ಅತ್ತು ಬಿಡತಾಳ.. ಅಮ್ಯಾಲೆ ಅವಂಗ "ನನ್ನ ಮದುವಿ ಆಗ್ತೀಯಾ?" ಅಂತ ಕೇಳತಾಳ.. ಅಂವ ಹೂಂ ಅಂದ.. ಸಮಾಜದ ಸಂಪ್ರದಾಯಕ್ಕ ಎದರ ಬಿದ್ದು ಅವರಿಬ್ಬರಿಗೂ ಲಗ್ನ ಆಯ್ತು..

ಮುಂದ ಎಲ್ಲಾ ಅರಾಮಾಗ್ತದ.. ಎರಡು ಗಂಡು ಮಕ್ಕಳೂ ಆದವು.. ಕೊನೀಗೆ ಎಲ್ಲಾ ಸುಖ ಅನ್ನೊಕ್ಕಿಂತ ಮುಂಚೆ ದುಃಖ ಅವರ ಮನ್ಯಾಗ ಕಾಲು ಹಾಕ್ತದ.. ಅವತ್ತು ರತ್ನಾ ಅಂತಾಳ "ನಿನ್ನ ಸಂಬಳ ನನಗ ಸಾಕಾಗಂಗಿಲ್ಲ, ಏನು ಕೆಲ್ಸ ಮಾಡ್ತಿಯೋ ಎನೋ! ಒಂದು ಬಂಗಾರದ ಸರ ಕಂಡಿಲ್ಲ ಒಂದು ಫಾರಿನ್ ಟ್ರಿಪ್ ಕಂಡಿಲ್ಲ". ಶಂಕರ ನಕ್ಕು ಸುಮ್ಮನೆ ಅಲ್ಲಿಂದ ಹೋಗಿಬಿಡ್ತಾನ, ಅಲ್ಲೇ ಇದ್ರ ಮಾತು ಬೆಳೀತಾವ ಅಂತ.. ಮೌನ ಮಾತ್ರ ಬೆಳೀತು. ಒಂದೆರಡು ಸರ್ತಿ ತಿಳಿಸಿ ಹೇಳಿದ, ರತ್ನಾಗ ತಿಳೀಲಿಲ್ಲ.. ಮುಂದ ಆಸ್ತಿ ಇಲ್ಲ, ಅಂತಸ್ತು ಇಲ್ಲ ಅಂತನೂ ಜಗಳ ಆದವು.. ಶಂಕರ ನಕ್ಕು ಸುಮ್ಮನಾಗ್ತಿದ್ದ.. ಮುಂದ ಅಕಿಗೆ ಜೀವನ ಅರ್ಥ ಆಗ್ತದ ಅಂತ...

ಹತ್ತು ವರ್ಷ ಆದ್ವು ಲಗ್ನ ಆಗಿ.. ಅವತ್ತು ಶಂಕರ ರತ್ನಾಗ ವಿಷ್ ಮಾಡಬೇಕು ಅಂತ ಒಂದು ಹಗ್ ಕೊಡ್ತಾನ. .ಅಕಿ ಅವಾಗ ಅವನ ಮಾರಿ ನೋಡಿ ಅಂತಾಳ.. "ನೀನು ಆರು ಫೀಟ್ ಎತ್ತರ ಇರಬೇಕಾಗಿತ್ತು.. ಅಂದ್ರ ಛೋಲೋ ಇರ್ತತಿತ್ತು.. ನನ್ನ ಎಲ್ಲ ಫ್ರೆಂಡ್ಸ್ ಹೇಳ್ತಾರ ನೀವಿಬ್ರೂ ಒಂದೇ ಎತ್ತರ ಇದ್ದೀರಿ ಅಂತ.. ರಸ್ತೆ ಮ್ಯಾಲೆ ನಡದ್ರ ನನಗ ನನ ಗಂಡ ಜೊತೀಗೆ ಬರ್ಲಿಕ್ಕಹತ್ತ್ಯಾನ ಅಂತ ಅನಸಂಗೇ ಇಲ್ಲ.." ಮಾತು ಹಂಗೇ ಮುಂದವರದು "ನೀನು ನನ್ನ ಪ್ರೀತಿ ಮಾಡಿ ಲಗ್ನ ಮಾಡ್ಕೊಂಡಿಲ್ಲ, ನಾನು ಗಂಡ ಬಿಟ್ಟಾಕಿ ಅಂತ ದಯಾ ತೋರಿಸಿ ಲಗ್ನ ಮಾಡ್ಕೊಂಡೀರಿ" ಅನ್ನೋ ತನಕ ಬರತದ..

ಈ ಸರ್ತಿ ಅಂವ ನಗಲಿಲ್ಲ.. ಒಮ್ಮೆ ಸುಮ್ಮನ ಹಂಗ ರತ್ನಾನ ಕಣ್ಣಾಗ ಕಣ್ಣಿಟ್ಟು ನೋಡ್ತಾನ.. ಅವನ ಮಾರೀ ಮ್ಯಾಲಿನ ಆ ನಗು ಅಲ್ಲಿ ಇರಲಿಲ್ಲ.. ಸುಮ್ಮನ ತಲಿ ತಗ್ಗಿಸಿಕೊಂಡು ಅಲ್ಲಿಂದ ಹೋಗಿಬಿಡ್ತಾನ.. ಅಕೀಗೆ ಯಾಕೋ ಸಿಟ್ಟ ಬರ್ತದ.. ಶಂಕರಗ ಫೋನ್ ಮಾಡಿ ಬಾಯಿಗೆ ಬಂದಹಂಗ ಬೈಯ್ತಾಳ.. ಇಷ್ಟು ವರ್ಷ ಹೇಳಿದ್ದನ್ನೇ ಮತ್ತ ಹೇಳತಾಳ.. ಅಂವ ಒಂದೇ ಮಾತ ಹೇಳತಾನ.. "ನೋಡು, ಸಿಟ್ಟಿನ ಕೈಯ್ಯಾಗ ಬುದ್ಧಿ ಕೊಡಬ್ಯಾಡ.. ನಮಗಿಂತ ಬಡವರು ಭಾಳ ಮಂದಿ ಇದ್ದಾರ.. ಅವರನ್ನ ನೋಡಿ ಹೆಂಗ ಸಂತೋಷದಿಂದ ಇರಬೇಕು ಅಂತ ಕಲೀಬೇಕು.. ದೇವರು ನಮಗ ಸಾಕಷ್ಟು ಕೊಟ್ಟಾನ, ಅದರಾಗೇ ಅರಾಮಾಗಿ ಇರೋಣಂತ".. ಆದ್ರ ರತ್ನಾಗ ತನ್ನ ಶ್ರೀಮಂತ ಗೆಳ್ಯಾರ ಮಾತಿನ ಗಲಾಟಿಯೊಳಾಗ ಅಂವನ ಮಾತು ಕೇಳಸಂಗೇ ಇಲ್ಲ..

ಅವನಿಗೆ ಒಂದು ದಿವಸ ಸಿಡಲಿನ್ಹಂಗ ಬಂದು ಬಡೀತದ ಆ ಡೈವೋರ್ಸ್ ಪೇಪರಿನ ಪೋಸ್ಟ್.. ಆಕಿ ಕಂಡಿಷನ್ ಏನೂ ಇಲ್ಲ, ಅವನ ರೊಕ್ಕಾನೂ ಬ್ಯಾಡ, ಅವನ ಮಕ್ಕಳೂ ಬ್ಯಾಡ ಏನೂ ಬ್ಯಾಡ, ನನ್ನ ಬಿಟ್ರ ಸಾಕು ಅನ್ನೋ ರೀತಿ ಇತ್ತು.. ಶಂಕರ ಅಕಿಗೆ ಫೋನ್ ಮಾಡಿ "ದಯಮಾಡಿ ಇಂಥ ನಿರ್ಧಾರ ಮಾಡಬ್ಯಾಡ, ಮಾತಾಡೋಣ" ಅಂತ ಕೇಳತಾನ. ಅಕಿ ಒಂದೂ ಮಾತ ಆಡಲಾರದೇ ಫೋನ್ ಕಟ್ ಮಾಡಿಬಿಡ್ತಾಳ.. ನೂರು ಜನ ಅಕಿಗೆ ಸಾವಿರ ರೀತಿಲೆ ಹೇಳತಾರ, ಆದ್ರ ಅಕಿಗೆ ಯಾವದೂ ಬ್ಯಾಡ ಆಗಿತ್ತು.. ಕೊನೀಗೆ ಅಂವ ಅದರ ಮ್ಯಾಲೆ ಸಹಿ ಮಾಡಬೇಕಾಗ್ತದ.. ಅಲ್ಲಿಗೆ ಶಂಕರನ ಜೀವನದ ಎರಡನೇ ಅಧ್ಯಾಯ ಮುಗದಹಂಗ ಆಗತದ.. ಮಕ್ಕಳನ್ನ ನೋಡಕೋತ ನಾ ಬದಕತೀನಿ ಅನ್ನಕೋತಾನ.. ರತ್ನಾ ಇನ್ನೊಬ್ಬ ಜಾಸ್ತಿ ರೊಕ್ಕ ಇರೋ ಗಂಡಸಿನ್ನ ಲಗ್ನ ಆಗತಾಳ..

ಇಷ್ಟೆಲ್ಲಾ ಆದಮ್ಯಾಲೆ, ಆ ಶಂಕರ ನನ್ನ ಗೆಳ್ಯಾಗ ಒಮ್ಮೆ ಬಾರಿನ್ಯಾಗ ಸಿಕ್ಕಿದ್ದ. ಮಾರಿ ಮ್ಯಾಲೆ ನಗು ಇದ್ದರೂ ಅದು ಸತ್ತು ಎಷ್ಟೋ ವರ್ಷ ಆಗ್ಯಾದ ಅಂತ ಅನ್ನಸ್ತಿತ್ತು.. ನನ್ನ ಗೆಳ್ಯಾನ್ನ ನೋಡಿದ್ದೇ ತಡ, ಎಲ್ಲಿತ್ತೋ ಎನೋ ಅಷ್ಟೊಂದು ಕಣ್ಣೀರು, ಹಿಡಕೊಂಡು ಅತ್ತಬಿಟ್ಟ.. ಸಮಾಧಾನ ಆದಮ್ಯಾಲೆ ಅಂವ ಕುಡೀಲಿಲ್ಲ.. ಎದ್ದು ಹೋಗೋ ಮುಂದ ನನ್ನ ಗೆಳ್ಯಾಗ ಒಂದ ಪ್ರಶ್ನೆ ಕೇಳಿದ..

"ಅವತ್ತು ಆಕಿ ನನ್ನ ಹೆಗಲ ಮ್ಯಾಲೆ ತಲಿ ಇಟ್ಟು ಅಳೋಮುಂದ ನನ್ನ ಹೆಗಲು ಅಕಿ ತಲೀಗೆ ಸರಿಯಾದ ಎತ್ತರದಾಗ ಇತ್ತು ಅನ್ನೊ ನೆನಪು ಸಹಿತ ಬರಲಿಲ್ಲೇನೋ ಅಕಿಗೆ? ಪ್ರೀತಿ ಪ್ರೇಮ ಅನ್ನೋದು ದೇಹದ ಎತ್ತರಕ್ಕ ಸೇರಿದ್ದೋ ಅಥವಾ ಮನಸ್ಸಿನ ಎತ್ತರಕ್ಕ ಸೇರಿದ್ದೋ? ನಿನಗ ಗೊತ್ತಾದ್ರ ನನಗೂ ಹೇಳೋ.. ಅಮ್ಯಾಲೆ ಇನ್ನೊಂದು ಪ್ರಶ್ನೆ ಅದಪಾ ನಿನಗ.. ಪ್ರೀತಿ ಅನ್ನೋದು Sympathyನೋ ಅಥವಾ Empathyನೋ? ನಿನಗೇನಾರೆ ಉತ್ತರ ಸಿಕ್ಕರ ನನಗೂ ತಿಳಸಪಾ.."

ಅಷ್ಟರೊಳಾಗ ಅಂವನ ಹಿರೀಮಗ ಬಂದು ಅವರ ಅಪ್ಪಗ "ಆಪ್ಪಾಜಿ, ನಡೀರಿ ಮನೀಗೆ, ಹೊತ್ತಾತು.. ನವೀನ ನಿಮ್ಮ ಹಾದಿ ಕಾಯಕೋತ ಕೂತಾನ, ನೀವು ಬಂದಮ್ಯಾಲೇ ಅಂವ ಊಟ ಮಾಡತಾನಂತ.." ಅಂತ ಹೇಳಿದ.. ಶಂಕರ ಹೊರಾಗ ಹೋದಮ್ಯಾಲೆ, ಆ ಹುಡುಗ ತಿರುಗಾ ವಾಪಸ್ ಬಂದು ನನ್ನ ಗೆಳ್ಯಾಗ ಹೇಳಿದ "ಕಾಕಾವ್ರೇ, ಅಪ್ಪಾಜಿಗ ನೀವರೆ ಒಂದು ಮಾತು ಹೇಳ್ರಿ.. ನಮಗ ರೊಕ್ಕಕ್ಕ ಊಟಕ್ಕ ಕಮ್ಮಿ ಇಲ್ಲ.. ಆದ್ರ ಅಪ್ಪಾಜಿ ಮಾರಿಮ್ಯಾಲೆ ಒಂದು ನಗು ನೋಡಿ ಎಷ್ಟೋ ವರ್ಷ ಆಗ್ಯಾವ.. ಇದರಕಿಂತ ನನಗ ಜಾಸ್ತಿ ಹೆಳಾಕ್ಕ ನಾ ಅಷ್ಟು ದೊಡ್ಡಾಂವ ಅಲ್ಲ.. ನಾ ಬರ್ತೇನ್ರಿ.."

ಇಷ್ಟೇ ಇದ್ದದ್ದು ಆ ಲೇಖನದೊಳಾಗ.. ಮುಂದೇನಾತು ಅಂತ ಕೇಳಲಿಕ್ಕ ನನ್ನ ಗೆಳ್ಯಾ ಮತ್ತ ನನಗ ಸಿಕ್ಕಿಲ್ಲ, ಅವನ ಫೋನ್ ನಂಬರ್ ನನ್ನ ಹತ್ರ ಇಲ್ಲ..

ನನ್ನ ಆ ಗೆಳ್ಯಾ ಎಲ್ಲಿಂದಾದ್ರೂ ಈ ಲೇಖನ ಓದಿದರ.. ನನ್ನ ನೆನಪು ನಿನಗ ಆದ್ರ.. ಅಷ್ಟು ಸಾಕು.. ನಾ ನಿನ್ನ ಮರತಿಲ್ಲಪಾ.. ಅವತ್ತು ನೀ ಬರದ ಆ ಘಟನೆನೂ ಮರತಿಲ್ಲ.. ನನಗ ಆ ಪ್ರಶ್ನೆಗಳ ಉತ್ತರ ಗೊತ್ತವ. .ಆದ್ರ ಆ ಉತ್ತರಗಳು ಆ ನಿನ್ನ ಗೆಳ್ಯಾಗ ಹೇಳಿದ್ರೂ ಈಗ ಉಪಯೋಗ ಇಲ್ಲ.. ಕಾಲ ಮುಂದಕ್ಕ ಹೋಗ್ತದಲ? ಹಂಗೇ ಮುಂದಕ್ಕ ಹೋಗ್ತದ... ಅದರ ಜೊತೀಗೆ ಆ ನಿನ್ನ ಗೆಳ್ಯಾನ ಮಕ್ಕಳ ಜ್ಞಾನನೂ ಮನಸೂ ಬೆಳೀತದ..

ಮುಂದ ಯಾವತ್ತರೆ ಆ ನಿನ್ನ ಗೆಳ್ಯಾನ ಆ ಹುಡುಗಿ ನನಗ ಸಿಕ್ರ ನಾ ಹೇಳತೀನಿ ಬಿಡು "ನೀ ಕಳಕೊಡದ್ದು ಎಂಥಾ ಎತ್ತರದ ಪ್ರೀತಿ ಅಂತ.."

No comments: