Tuesday, October 23, 2012

ಗೆಳೆಯನ ರೊಳ್ಳಿಗಳು !!

ಬರೆದೇನೆಂದರ ಬರೆಯಲಿ ಹ್ಯಾಂಗ !

ಗೆಳೆಯನ ರೊಳ್ಳಿಗಳು !!


ಅವತ್ತು ಸುಮ್ಮನೆ ಫೇಸಬುಕ್ ಮ್ಯಾಲೆ ಏನೋ ಓದಕೊತ ಕೂತಿದ್ದೆ ! ನನ್ನ ಗೆಳ್ಯಾ ಒಬ್ಬಾವ ಏನೋ ಲಿಂಕ್ ಕಳಿಸಿದ.. ಅದು ಅವ ಬರಿಯೋ ಒಂದು ಬ್ಲಾಗ್ ಆಗಿತ್ತು... ಏನೋ ಬರದಾನ ನೋಡಮ ಅಂತ ಕ್ಲಿಕ್ ಮಾಡಿ ನೋಡಿದೆ...
ಮತ್ತ ಅದ ಹಳೆ ಪ್ರೇಮ ರೋಗದ ಅಳುಬುರುಕ ಕಥಿ !

ಅವ ತನ್ನ ಪ್ರೀತಿ ಮುರುದ ಬಿದ್ದ ಒಂದು ವರ್ಷ ಆಯ್ತು ಅಂತ ಅದರ ವಾರ್ಷಿಕೋತ್ಸವ ಆಚರಣೆ ಮಾಡ್ತಿದ್ದ.. ಜೊತಿಗೆ ಒಂದು ಕವನ ಬ್ಯಾರೆ !
ನೀ ಇದ್ದಾಗ ಹಿಂಗಿತ್ತು, ನೀ ಹೋದಿ, ಆಮ್ಯಾಲೆ ಹಿಂಗಾತು ಅಂತ ಏನೇನೋ ಬರ
ದಿದ್ದ.. ನನಗ್ಯಾಕೋ ಓದಲಿಕ್ಕೆ ಮನಸ್ಸು ಬರಲಿಲ್ಲ.. ಇರ್ಲಿ ಪಾಪ ಏನೋ ಕಳಿಸ್ಯಾನ ಅಂತ ಓದಿದೆ.. ಬರೆ ಅದೇ ಕಥಿ..

ನನಗ್ಯಾಕೋ ಮನಸ್ಸಿಗೆ ಬ್ಯಾಸರ ಆಯ್ತು.. ನನ್ನ ಗೆಳ್ಯಾಗ ಮೋಸ ಆಗ್ಯಾದ ಅಥವಾ ಅವನ ಹುಡುಗಿ ಅವನ್ನ ಬಿಟ್ಟು ಹೋಗ್ಯಾಳ ಅಂತ ಅಲ್ಲ..
ಆಕಿ ಬಿಟ್ಟು ಹೋಗ್ಯಾಳ ಅಂದ್ರ ಇವನಿಗೆ ಇಷ್ಟು ಬ್ಯಾಸರ ಆಯ್ತೇನು ?? ಬಿಟ್ಟು ಹೋದರ ಬ್ಯಾಸರ ಆಗೋವಷ್ಟು 
ಹತ್ರ ಇದ್ದಳಾ ಅಕಿ ?? ಬಿಟ್ಟು ಹೋಗಮುಂದ ಆಕಿಗೆ ಏನು ಅನ್ನಸಲಿಲ್ಲಾ ? 

ಹೋಗ್ಲಿ, ಆಕಿ ಬಿಟ್ಟು ಹೋಗ್ಯಾಳ ಅಂದ್ರ ಇವನಿಗೆ ಏನಾರೆ ಮನೋರೋಗ ಅದನಾ ? ಮನೋರೋಗ ಅಂದ್ರೆ ಘಾಬರಿ ಆಗಬ್ಯಾಡ್ರಿ.. ನಾನು ಹೇಳಿದ್ದು ಮನಸ್ಸಿನ ಏನೋ ಒಂದು ಕೆಟ್ಟ ಚಾಳಿ.. ಯಾಕಂದ್ರೆ ಭಾಳಷ್ಟು ಹುಡುಗ್ಯಾರು ಹುಡುಗರ ಮನಸ್ಸು ನೋಡೇ ಬಿಟ್ಟು ಹೋಗ್ತಾರ..

ಇಲ್ಲ ಹಂಗ ಏನೂ ಇರಲಿಕ್ಕಿಲ್ಲ ಅನ್ನಸ್ತಿತ್ತು ಮನಸ್ಸಿಗೆ.. ಯಾಕಂದ್ರ ಅವ ಹೆಂಗ ಇದ್ದಾನ ಅಂತ ನನಗ ಗೊತ್ತಿತ್ತು.. ಮನಸ್ಸಿನ್ಯಾಗ ನೂರು ಬ್ಯಾಸರಿಕಿ ಇದ್ದರೂ ಹೊರಾಗ ಏನಾರೆ ತಮಾಶಿ ಮಾಡ್ಕೊತ ಓಡ್ಯಾಡ್ತಿರ್ತಾನ.. ಎಲ್ಲಾರ್ನೂ ನಗಸಬೇಕು ಅಂತ.. ಅಂಥಾವ ಒಬ್ಬ ಹುಡುಗಿಗೆ ಬ್ಯಾಸರ ಆದ್ನೇನು ?

ನನಗ ಅವ ಯಾಕ ಅದೇ ಹಳೆ ಕಥಿ ಬಗ್ಗೆ ಮತ್ತ ಮತ್ತ ನೆನಿಸಿ ನೆನಿಸಿ ಪಾನಮತ್ತ ಆಗ್ತಾನೋ ಗೊತ್ತಿಲ್ಲ.. ಕಣ್ಣು ಕೆಂಪಗ ಆಗಿರ್ತಾವ, ಒಳಾಗಿನ ದುಖಃ ಹೊರಾಗ ಬರಲಾರದೆ ಮಾರಿ ದಪ್ಪ ಆಗಿರ್ತದ, ಹೊರಾಗ ನಗ್ತಿರ್ತಾನ.. ಯಾರ್ಯಾರಿಗೋ ಏನಾರೆ ಅಂತಾನ.. ಅವರು ನಗತಾರ.. ಇವ ಸುಮ್ಮನಾಗ್ತಾನ... ನಾನೂ ಅವನ ಮಾರಿ ನೋಡಿ ಸುಮ್ಮನೆ ಇರ್ತೀನಿ..

ನನಗ ಅವನ ಈ ಪ್ರೇಮದ ಬಗ್ಗೆ ಜಾಸ್ತಿ ಗೊತ್ತಿಲ್ಲ.. ಯಾವುದರ ಬಗ್ಗೆ ಗೊತ್ತಿಲ್ಲೋ ಅದರ ಬಗ್ಗೆ ಮಾತಾಡೋದು ತಪ್ಪಾಗ್ತದ.. ಆದ್ರೆ ಹುಡುಗ್ಯಾರ ಬಗ್ಗೆ ನನಗ ಸ್ವಲ್ಪರೆ ಗೊತ್ತದ.. (ಅಂತ ನಾ ಅನ್ಕೊಂಡಿನೇನೋ ಗೊತ್ತಿಲ್ಲ !) ಇಂಥಾ ಕಥಿ ಕೇಳಿದ್ರೆ ನನಗ ಏನೋ ಬ್ಯಾಸರ ಆಗ್ತದ.. ಒಂದು ಕಥಿ ನಾನೂ ಕೇಳಿದ್ದೆ. ಒಂದು ದೊಡ್ಡ ಆಳದ ಮರ ಇರ್ತದ.. ಅದರ ಒಂದು ಕೊಂಬಿ ಮ್ಯಾಲೆ ಒಂದು ಸಣ್ಣ ಗಿಳಿ ಬಂದು ಕೂಡ್ತದ.. ಮರದ ಜೊತಿಗೆ ಗೆಳೆತನ ಮಾಡ್ತದ.. ದೊಡ್ದದಾತು, ಹಾರಿತು, ಇನ್ನು ಮ್ಯಾಲೆ ಹಾರಿತು.. ಆಕಾಶ ಜಾಸ್ತಿ ಇಷ್ಟ ಆತು, ಮರದ ಕೊಂಬಿ ಬ್ಯಾಸರ ಆತು.. ಒಮ್ಮೆ ಹಾರಿದ್ದು ಮತ್ತ ತಿರುಗಿ ಬರಲಿಲ್ಲ.. ಮರಕ್ಕ ಹಾದಿ ಕಾದು ಕಾದು ಸಾಕಾಯ್ತು.. ಮನಸಿನ್ಯಾಗೆ ಒಮ್ಮೆ ನಕ್ಕು ಸುಮ್ಮನಾಯ್ತು..

ಹಿಂಗ ಇನ್ನೊದು ಮರದ ಕಥಿನೂ ಶುರು ಆಯ್ತು..

ಆದ್ರ ಇಲ್ಲಿ ನಮಗ ಗಿಳಿ ಮೋಸ ಮಾಡಿತೋ ಇಲ್ಲ ಮರ ಮೋಸ ಹೋಯ್ತೋ ಅನ್ನೋದು ಮುಖ್ಯ ಅಲ್ಲ.. ಗಿಳಿ ತನಗ ಬೇಕಿದ್ದು ಮಾಡಿತು.. ಮರ ಗಿಳಿಗೆ ತನ್ನ ಮಿತಿ ಒಳಗಾ ಏನೇನು ಕೊಡಲಿಕ್ಕೆ ಆಗ್ತದೋ ಅದೆಲ್ಲ ಕೊಟ್ಟಿತ್ತು.. ಆದ್ರ ಅದರ ಮ್ಯಾಲೆ ತನ್ನ ಹಕ್ಕು ಅದ ಅಂತ ಮಾತ್ರ ಅನ್ಕೊಳ್ಳಿಲ್ಲ.. ಗಿಳಿ ಹಾರಿ ಹೋದ ಮ್ಯಾಲೆನೂ ಮರ ಅಲ್ಲೇ ಇತ್ತು..

ತನ್ನ ಎಲ್ಲ ತೋಳುಗಳನ್ನ ಚಾಚಿಕೊಂಡು ನಿಂತಿತ್ತು.. ಅದಕ್ಕ ಒಂದು ಮಾತ್ರ ಗೊತ್ತು.. ನೂರಾರು ಗಿಳಿ ಬರ್ತಾವ, ಹೋಗ್ತಾವ..
ಅದಕ್ಕ ಗೊತ್ತಿತ್ತು.. ನಾ ಮಾತ್ರ ಇಲ್ಲೇ ಇರೋದು ಅಂತ.. ಬರೋ ಗಿಳಿಗಳಿಗೆಲ್ಲ ಆಶ್ರಯ ಕೊಡಬೇಕು ಅಂತ..

ಆದ್ರ ಹಾರಿ ಹೋದ ಗಿಳಿ ಸಲುವಾಗಿ ಆ ಆಲದ ಮರ ಕಣ್ಣೀರು ಇಡಬೇಕೋ ?

ಬ್ಯಾಡ ಅಂತ ನನ್ನ ಅನಿಸಿಕಿ...

ನೀವೇನಂತೀರಿ ?

No comments: