Tuesday, October 30, 2012

ನನ್ನೊಳಗಿನ ಆ ಇನ್ನೊಬ್ಬನ್ನ ಹುಡುಕೋ ಮುಂದ..

ಬರದೇನೆಂದರ ಬರೆಯಲಿ ಹ್ಯಾಂಗ !

ಅವತ್ತು ನಾನು ಏನೂ ವಿಶೇಷ ಇರಲಾರದ ಒಬ್ಬ ಮಾಮೂಲಿ ಹುಡುಗ.. ಸ್ಕೂಲಿನ್ಯಾಗ ಹಾಡ ಹಾಡಿದೆ, ನಮ್ಮ ಮಾಸ್ತರ ನಾ ಛೋಲೋ ಹಾಡ್ತೀನಿ ಅಂತ ಮೊದಲನೇ ಬಹುಮಾನ ಪೆನ್ ಕೊಟ್ಟ್ರು... ಮುಂದ ಮತ್ತ ಎಷ್ಟೋ ವರ್ಷ  ಪೂರ್ತಿ ಮೌನ.. ಮನಸಿನ ಒಳಾಗ ಏನೂ ನಡದಿಲ್ಲ ಅನ್ನೋ ಹಂಗ..

ಒಮ್ಮೆ ನನ್ನ ಗೆಳ್ಯಾ ಚಿತ್ರ ಬಿಡಿಸೋದನ್ನ ನೋಡಿದೆ.. ನನಗೂ ಅದರ ಹುಚ್ಚು ಹಿಡೀತು !   ಚಿತ್ರ ಬರ್ದೇ ಬರ್ದೆ.. ಬರಲಿಲ್ಲ.. ಯಾಕೋ ನನಗ ಇದು ಬರಂಗಿಲ್ಲ ಅನ್ನೋ ಭಾವನೆ ಬಂತು.. ಬಣ್ಣ, ಬ್ರಷ್ಷು ಎಲ್ಲಾ ಕಿತ್ತಿ ಮೂಲ್ಯಾಗ ವಗದೆ.. ಹುಚ್ಚು ಬಿಟ್ಟು ಅರಾಮಾತು..

ಮುಂದ ಪಿ.ಯು.ಸಿ. ಓದೋಮುಂದ ನನಗ ಒಬ್ಬ ಹೊಸ ಗೆಳ್ಯಾ ಸಿಕ್ಕ, ಸುಧೀರ ಅಂತ.. ಅವತ್ತು ಅವನ ಮನಿಗೆ ಹೋಗಿದ್ದೇ ನನ್ನ ಜೀವನದಾಗ ಒಂದು turning point ! "ಅರ್ಥ್" ಅನ್ನೋ ಹಿಂದಿ ಸಿನೆಮಾದ ಹಾಡು ಕೇಳಿಸಿದ..  ಅದರ ಒಂದೂ ಶಬ್ದ ನನಗ ಅರ್ಥ ಆಗಲಿಲ್ಲ.. ಆದರ ಅದ್ಯಾಕೋ ಗೊತ್ತಿಲ್ಲ.. ನನಗ ಏನೋ ದೂರದಾಗ ಬೆಳಕು ಕಂಡಹಂಗ ಆಯ್ತು.. ಬಹುಶಃ ಸಾಹಿತ್ಯದ ಕಡಿಗೆ ನಾನು ನೋಡಿದ್ದು ಅದ ಮೊದಲು ಇರಬೇಕು.. ಆದರ ಅದರ ಬಗ್ಗೆ ಜಾಸ್ತಿ ತಲಿ ಕೆಡಿಸಿಕೊಬೇಕು ಅಂತ ಅನ್ನಿಸಲಿಲ್ಲ.. ನಾನು ಮೊದಲೇ ಹಿಂದಿ ಪಂಡಿತ, ಆಯಿಯೇ ಜಾಯಿಯೇ ಬಿಟ್ರ ಮುಂದ ಗೊತ್ತಿರಲಿಲ್ಲ !  ಆಮ್ಯಾಲೆ ಪಿ.ಯು.ಸಿ. ಫೇಲ್ ಆಗಿ ಡಿಪ್ಲೋಮಾ ಸೇರಿದ ಮ್ಯಾಲೆ ನನ್ನ ಹಿಂದಿ+ಉರ್ದು ಜ್ಞಾನ ಬೆಳೀತು.. ನನ್ನ ತರಗತಿಯ ಶಂಶುದ್ದೀನ್, ಆದಿಲ್, ನೂರ್, ಇರ್ಫಾನ್ ಹಾಗೂ ನನ್ನ ಕಿರಿಯ ಮಿತ್ರರಾದ ಜವಾದ್ ಇವರೆಲ್ಲಾರು  ನಂಗ ಉರ್ದು ಭಾಷೆ ಕಲೀಲಿಕ್ಕೆ ಸಹಾಯ ಮಾಡ್ಯಾರ.. ಇವರೆಲ್ಲಾರಿಗೂ ನಾನು ಯಾವತ್ತಿಗೂ ಚಿರಋಣಿ..

ಅವತ್ತು ನಾ ಕೇಳಿದ ಹಾಡುಗಳು ಹಿಂದಿ ಸಿನೆಮಾದ ಅತ್ಯುತ್ತಮ ಗಝಲ್ ಅಂತ ಅನ್ನಿಸಿಕೊಂಡೋವು !!  ಅವನ್ನ ಸಂಗೀತ ಸಂಯೋಜನೆ ಮಾಡಿ ಹಾಡಿದ್ದು ಗಝಲ್ ಜಗತ್ತಿನ ಅನಭಿಷಿಕ್ತ ದೊರೆ ಜಗಜಿತ್ ಸಿಂಗ್. ಅವರ ದನಿಯೊಳಗ ಅದೇನು ಮಾಯಾ ಇತ್ತೋ ಗೊತ್ತಿಲ್ಲ.. ನನ್ನ ಹಂಗ ಸಣ್ಣಕ ಒಳಾಗ ಎಳಕೋತ ಹೋಯ್ತು.. ನನಗ ಗೊತ್ತಿರ್ಲಾದೆ ಅದನ್ನ ಮತ್ತ ಮತ್ತ ಕೇಳಲಿಕ್ಕೆ ಶುರು ಮಾಡಿದೆ.. ಅವರ ಬ್ಯಾರೆ ಬ್ಯಾರೆ ಆಡಿಯೋ ಕ್ಯಾಸೆಟ್ಟು ಖರೀದಿ ಮಾಡಿ ನನ್ನ ಅಕ್ಕ ಎಲ್ಲಾರ ಸಲುವಾಗಿ ಕೊಡಿಸಿದ ಟೇಪ್ ರೆಕಾರ್ಡರ್ ಬಗಲಾಗ ಇಟಗೊಂಡು ಒಂದೊಂದೇ ಹಾಡು ಬರ್ಕೊಂಡೆ.. ಹಾಡಿದೆ.. ಅರ್ಥ ಗೊತ್ತಾಗಲಿಲ್ಲ ಅಂದ್ರ ನನ್ನ ಗೆಳ್ಯಾರ ತಲಿ ತಿಂದೆ.. ಅವರೂ ಸಿಟ್ಟ ಆಗಲಿಲ್ಲ, ಬದಲಿಗೆ ಕೂಡಿಸಿ ತಿಳಿಸಿ ಅದರ ಅರ್ಥ, ಮಹತ್ವ ಎಲ್ಲ ಹೇಳಿದ್ರು...  ನಾನೂ ಹಾಡಲಿಕ್ಕೆ ಶುರು ಮಾಡಿದೆ.. ಮನ್ಯಾಗ ಬೈಸಿಕೊಂಡೆ.. "ಲೇ ತಿಮ್ಮ್ಯಾ, ಏನೋ ಅವು ಹಾಡು? ಒಂದರೆ ತಿಳಿಯಂಗಿಲ್ಲ !!"  ಅಂದ್ರು..

ಕೊನೀಗೆ ನಾನೂ ಕೆಲವು ಗಝಲ್ ಬರದೆ.. ಶಾಯರಿ ಬರದೆ.. ಅಲ್ಲಿಗೆ ಒಂದು ಭಾಗ ಮುಗದಿತ್ತು.. ಬೆಂಕಿ ಇನ್ನು ಆರಿಲ್ಲ... ಅಲ್ಲಿ ನನ್ನ ಅಂಕಿತ "ಮುಜಫ್ಫರ್".. ಅದರ ಅರ್ಥ "ಗೆದ್ದವನು" ಎಂದಾದರೂ, ನಾನು ನಿಜವಾಗಿ ಗೆದ್ದಿರಲಿಲ್ಲ..

ಒಮ್ಮೆ ನಾ ಕನ್ನಡದ ತೆಕ್ಕ್ಯಾಗ ಬಿದ್ದೆ.. ಹೈದರಾಬಾದಿನ್ಯಾಗ ಇದ್ದಾಗ ಕನ್ನಡಕನ್ನಡಿ ಅಂತ ಒಂದು ಯಾಹೂ ಗುಂಪು ಇತ್ತು.. ಅಲ್ಲಿ ಶ್ರೀವತ್ಸ ಜೋಷಿ, ಕಿರಣ, ರೋಹಿತ್ ಹಿಂಗೆ ಭಾಳ ಮಂದಿ ಇದ್ದರು.. ಎಲ್ಲಾರೋ ಏನಾರೆ ಒಂದು ವಿಷಯ ತೊಗೊಂಡು ಅದರ ಬಗ್ಗೆ ಮಾತು-ಕಥಿ ಆಡತಿದ್ವಿ.. ನನಗ ಖರೇನೆ ಇಷ್ಟ ಆಗಿದ್ದು ಜೋಷಿಯವರ ಮಾತುಗಳು.. ಆವಾಗೆ ಅವರೂ ವಿಚಿತ್ರಾನ್ನ ಅಂತ ಒಂದು ಅಂಕಣ ಬರೀತಿದ್ರು.. ಏನು ಅದ್ಭುತ ಮನಿಷ್ಯಾರಿ ಅವ್ರು ! ಆದರ ನನಗ ಅಲ್ಲಿ ಜಾಸ್ತಿ ಮಾತಾಡೋ ಅಧಿಕಾರ ಇರಲಿಲ್ಲ.. ಯಾಕಂದ್ರ ಕನ್ನಡ ಸಾಹಿತ್ಯದ ಬಗ್ಗೆ ನನಗ ಏನೂ ಅಂದ್ರ ಏನೂ ಗೊತ್ತಿರಲಿಲ್ಲ ! ಮನಸ್ಸಿಗೆ ಭಾಳ ಬ್ಯಾಸರ ಆಗ್ತಿತ್ತು.. ಆದರ ಅವರು ಹೇಳೋದನ್ನ ಕೇಳಕೋತ ಇರ್ತಿದ್ದೆ.. ಆದರ ಕಿರಣ ರೋಹಿತರ ಪ್ರಶ್ನೆಗಳೂ ಭಯಂಕರ ಇರ್ತಿದ್ವು.. ಒಮ್ಮೆ ಕಿರಣರ ಮಾರಿನೂ ನೋಡೋ ಅವಕಾಶ ಸಿಕ್ಕಿತ್ತು..!!

ನನಗೂ ಸಾಹಿತ್ಯದ ಬಗ್ಗೆ ಸೆಳೆತ ಜಾಸ್ತಿ ಆಯ್ತು !  ಹೆಂಗಪ ಮುಂದ ಅನ್ನೋದ್ರಾಗೆ, ನನಗ ಅದರೊಳಗ ಸಹಾಯ ಮಾಡಿದವರು ಭಾಳ ಮಂದಿ.. ಅದರೊಳಗ ಮೊದಲು ಅಕ್ಕ, ಆಮ್ಯಾಲೆ, ನಮ್ಮ "ಸೀನಪ್ಪ" ಅರ್ಥಾತ್ "ಶ್ರೀನಿವಾಸ್ ಕುಲಕರ್ಣಿ".. ನನಗ ಒಂದೊಂದೇ ಅನುಮಾನ ಬಂದಾಗ ಅದನ್ನ ಸಣ್ಣ ಕೂಸಿಗೆ ಹೇಳಿಧಂಗ ಹೇಳಿಕೊಟ್ಟ ಅಕ್ಕ.. ಝಾಗಳ್ಯಾಡಿ, ಗುದ್ದ್ಯಾಡಿ, ವಾದಾ ಮಾಡಿ ಕೊನಿಗೆ ಇಲ್ಲಾ ನನ್ನ ಒಪ್ಪಿಸಿ ಇಲ್ಲ ತಾ ಒಪ್ಪಿ ಕೈಬಿಡತಿದ್ದ  ಸೀನಪ್ಪ !! ಇಬ್ಬರೂ ಸೇರಿ ಓಡ್ಯಾಡಿದ ಅವೆಷ್ಟು ಸಭೆಗಳು, ಆ ರವೀಂದ್ರ ಕಲಾಕ್ಷೇತ್ರ, ಚಾಮರಾಜಪೇಟೆ, ಮಲ್ಲೇಶ್ವರ, ಆ ಕನ್ನಡ ಪುಸ್ತಕ ಮೇಳಗಳು, ಆ ಪುಸ್ತಕ ನಾ ತೊಗೋತೀನಿ ಇದು ನೀ ತೊಗೋ ಅಂತ ಅನುಕೂಲ ಮಾಡ್ಕೊಳ್ಳೋದು, ಪುಸ್ತಕ ವಿನಿಮಯಗಳು... ಅಬ್ಬಬ್ಬ.. ಏನೆಲ್ಲಾ ಮಾಡಿಬಿಟ್ಟಿವಿ ಆ ಎರಡು ವರ್ಷದಾಗ !  ಇವತ್ತಿಗೂ ನನಗ ಏನಾರೆ ಅನುಮಾನ ಬಂದ್ರ ಮೊದಲು ಈ ಇಬ್ಬರನ್ನೇ ಕೇಳೋದು..  ಸಿಗಲಿಲ್ಲ ಅಂದ್ರ ಎಲ್ಲ್ಯಾರೆ ಹುಡುಕ್ಯರ ಹೇಳತಾರ !

ಕನ್ನಡದ ದೀಪ ಹಚ್ಚಿ ಪುಸ್ತಕ ಓದಲಿಕ್ಕೆ ಕೊಟ್ಟ, ಇಂಥಿಂಥಾ ಪುಸ್ತಕಗಳನ್ನು ಖರೀದಿ ಮಾಡಿ ಓದು ಅಂತ ಹೇಳಿದ ಎಲ್ಲಾರಿಗೂ ನನ್ನ ವಂದನೆಗಳು..

ಬರಿಲ್ಯಾ ಅಂತ ಒಮ್ಮೆ ಜೋಷಿಯವರನ್ನ ಕೇಳಿದ್ದೆ.. ಬರೀರಿ ಅಂದಿದ್ರು.. ಕೆಲವೊಂದು ಚುಟುಕು ಬರದೆ, ಕವನ ಬರದೆ, ಅನುವಾದನೂ ಮಾಡಿದೆ... ಎಲ್ಲಾರಿಗೂ ಇಷ್ಟ ಆಯ್ತು.. ಬರಿ ಬರಿ ಅಂತ ಪ್ರೋತ್ಸಾಹ ಕೊಟ್ಟ್ರು.. ಬರೀಲ್ಯಾ? ಅಂತ ಫೇಸಬುಕ್ ಗೆಳ್ಯಾರಿಗೂ ಕೇಳಿದೆ.. ಬರಿಯೋ ಮಾರಾಯ ಅಂದ್ರು (ಹಹಹಹ.. ಖರೇನೆ ಅಂದದ್ದು ಇಬ್ಬರೋ ಮೂವರೋ ಇರಬೇಕು! ನಾ ಯಾಕ ಬಿಟ್ಟೇನು! ).. ಬರೀಲಿಕ್ಕ ಶುರು ಮಾಡೀನಿ.. ಏನಾಗ್ತದ ನೋಡಮ..

ಎಲ್ಲೆಲ್ಲೋ ತಿರಗತಿದ್ದ ನನಗ ಇಲ್ಲೇ ಬೆಳಕು ಅದ, ಬಾ ನೋಡು ಅಂತ ಕೈ ಹಿಡದು ಕೂಡಿಸ್ಯಾರ.. ನನಗೂ ಇಲ್ಲೇ ಸುಖ ಅದ ಅಂತ ಒಳಾಗಿಂದ ಒಂದು ಮಾತು ಕೇಳಸ್ಲಿಕ್ಕ ಹತ್ತ್ಯಾದ..!  ನನ್ನೊಳಗಿನ ಆ ಇನ್ನೊಬ್ಬನೂ ಇಲ್ಲೇ ಸಿಗತಾನ ಅಂತ ಅನ್ನಿಸಲಿಕ್ಕ ಹತ್ತ್ಯಾದ..

ಸಿಗತಾನ ಅಂತೀರೇನು ?

No comments: